Sunday, December 4, 2011

ಅಪಶೃತಿ....



ಅವನೊಬ್ಬ ಭಾರಿ ದೊಡ್ಡ ಸಂಗೀತ ವಿದ್ವಾಂಸ ....
ದೇಶ ವಿದೇಶಗಳಲ್ಲಿ ಅವನಿಗೆ ಸಾವಿರಾರು ಅಭಿಮಾನಿಗಳಿದ್ದರು..
ಅವನ್ ಶಿಷ್ಯ ವೃಂದ  ಭಾರಿ ದೊಡ್ಡದಿತ್ತು . ಅವನು ಕಾಲಲ್ಲಿ ತೋರಿಸಿದ್ದನ್ನು ತಲೆಯ ಮೇಲೆ ಹೊತ್ತು ಮಾಡಲು ಜನ ಕಾದಿರುತ್ತಿದ್ದರು.....


 ಅವನಿಗಿದ್ದಿದ್ದ ಒಂದು ಭಾರಿ ಆಸೆಯೆಂದರೆ ತನ್ನ ಒಬ್ಬನೇ ಮಗನನ್ನು ತನಗಿಂತಲೂ ದೊಡ್ಡ ಸಂಗೀತ ವಿದ್ವಾಂಸನನ್ನಾಗಿ ಮಾಡುವುದು.ತನ್ನ ಮಗನಿಗೆ ತನ್ನ ಸಂಗಿತದ  ಜ್ಞಾನವನೆಲ್ಲಾ ಧಾರೆಯೆರೆದ. ಜಗತ್ತಿಗೆ ಮಗನ ಪ್ರತಿಭೆಯನ್ನು ತೋರಿಸಲು ದೊಡ್ಡ ಸಂಗೀತ ಕಛೇರಿಯನ್ನು ಹಮ್ಮಿಕೊಂಡ.ಕಛೇರಿಗೆ ಪತ್ನಿ ಹಾಗು ಮಗನ ಜೊತೆ ಹೊರಟಿದ್ದ ಕಾರು ಅಪಘಾತಕ್ಕಿಡಾಗಿ ಮಗ ಹಾಗು ಪತ್ನಿ ಮರಣಹೊಂದಿದರು. ಇವನೊಬ್ಬ ಬದುಕಿಕೊಂಡ


ಈಗ ಮನೆ ಖಾಲಿ ..ಮನಸ್ಸು ಖಾಲಿ ....
ಅವನ ಜೀವನದ ಶೃತಿ ತಪ್ಪಿದೆ ...
ಅವನು ಹಾಡುವುದನ್ನು ಸಂಪೂರ್ಣ ನಿಲ್ಲಿಸಿದ್ದಾನೆ ....





Sunday, November 13, 2011

ಹೊಸರುಚಿ.......



"ಆಹಾ!!! ನೀವು ಮಾಡಿದ ಅಡುಗೆ ಎಷ್ಟು ರುಚಿಯಾಗಿದೆ!!!! ನಾನು ಖಂಡಿತ ಇದ್ನ ನಮ್ಮನೇವ್ರಿಗೆ ಮಾಡಿಕೊಡ್ತೀನಿ...... ವೀಕ್ಷಕರೆ ನೀವು ಇದನ್ನ ಮನೆಲ್ಲಿ ಟ್ರೈ ಮಾಡಿ ಹೆಂಗೆ ಬಂತು ಅಂತ ನಮಗೆ ತಿಳಿಸಿ..."
ಎಂದು ಒಂದು ದಿನವೂ ಮನೆಯಲ್ಲಿ ಅಡುಗೆ ಮಾಡದ ’ಹೊಸ ರುಚಿ’ಯ ನಿರೂಪಕಿ ದೂರದರ್ಶನದಲ್ಲಿ ಹೇಳುತ್ತಿದ್ದರೆ , ರಿಸೆಶನ್ ನ ಕಾರಣದಿಂದಾಗಿ ಕೆಲಸ ಕಳೆದು ಕೊಂಡು ಮನೆಯಲ್ಲಿದ್ದ ಆ ನಿರೂಪಕಿಯ ಪತಿ , ಅಡುಗೆಗಾಗಿ ಈರುಳ್ಳಿ ಹೆಚ್ಚುತ್ತಾ ಕಣ್ಣೀರು ಸುರಿಸುತ್ತಿದ್ದ............  

ಕನ್ನಡಿ - ಕನ್ನಡಕ



ಮನೆಯಲ್ಲಿದ್ದ ಒಂದೇ ಕನ್ನಡಿಯು ಒಡೆದು ಹೋಯಿತು..... 
ಮೊಮ್ಮಗಳು "ನಾಳೆ ಕಾಲೇಜಿಗೆ ಹೋಗುವಾಗ ’ಅವನಿಗೆ’ ನಾನು ಚಂದ ಕಾಣಬೇಡವೆ ಛೇ!! ಈಗ ಅಲಂಕಾರ ಹೇಗೆ ಮಾಡಿಕೊಳ್ಳಲಿ??" ಎಂದುಕೊಂಡಳು.
ಮೊಮ್ಮಗ "ಛೆ!! ಮುಂದೆ ನಾನು ಸಿನೆಮ ಸ್ಟಾರ್ ಆಗೋನು ಈ ಸುಟ್ಟ ಮನೆಯಲ್ಲಿ ಒಂದು ಕನ್ನಡಿಗೂ ಗತಿಯಿಲ್ಲ!!" ಎಂದು ಬೈದುಕೊಂಡ
ತಂದೆ ತಾಯಿಯರಿಬ್ಬರನ್ನೂ ಕಳೆದು ಕೊಂಡ ಆ ಮೊಮ್ಮಕ್ಕಳನ್ನು ಹೊಲಿಗೆ ಕೆಲಸ ಮಾಡಿ ಅವರಿಗೆ ಯಾವ ಕೊರತೆಯೂ ಬರದ ಹಾಗೆ ಸಾಕುತ್ತಿದ್ದ ಅಜ್ಜಿಯು ಹೊಸ ಕನ್ನಡಕಕ್ಕೆಂದು ತೆಗೆದಿಟ್ಟ ಹಣದಲ್ಲಿ ಕನ್ನಡಿ ತಂದಿಟ್ಟು ತನ್ನ ಸೀಳು ಬಿಟ್ಟ ಕನ್ನಡಕ ಧರಿಸಿ ಕೆಲಸ ಮುಂದುವರೆಸಿದಳು......... 

ಚಂದ್ರ.........


ರಾಮು ಮತ್ತವನ ತಾಯಿಗೆ ಮೂರು ದಿನದಿಂದ ಹೊಟ್ಟೆಗೆ ತಣ್ಣೀರೆ ಗತಿ..........
ಸಣ್ಣ ಮಗು ರಾಮು ನಾಲ್ಕನೇ ರಾತ್ರಿ ಹಸಿವು ತಡೆಯಲಾರದೇ ಆಕಾಶದ ಪೂರ್ಣ ಚಂದ್ರನನ್ನು ನೋಡೀ ಅದು ತಿನ್ನಲು ಬೇಕೆಂದು ಹಠ ಮಾಡಿದ..........
ತಾಯಿಗೆ ಆ ಚಂದ್ರನನ್ನು ನೋಡಿ ಇತ್ತೀಚೆಗೆ ಅಗಲಿದ ರಾಮುವಿನ ತಂದೆ ಚಂದ್ರ ಕಾಡಿಸತೊಡಗಿದ..........
ಆ ತಾಯಿಯು "ನಿನಗೆ ಚಂದ್ರ ಬೇಕಾ?? ಹಾಗಾದರೆ ಬಾ ಅವನಲ್ಲಿಗೆ ಹೋಗೋಣ" ಎಂದು ಮನೆಯ ಹಿತ್ತಿಲಲ್ಲಿದ್ದ ಬಾವಿಯ ಚಂದ್ರನನ್ನು ರಾಮುವಿನ ಜೊತೆಗೆ ಸೇರಿದಳು... 

ಖಾಲಿ ಪುಟಗಳು..........



ಖಾಲಿ ಪುಟಗಳು ...........
ಲೇಖನಿಯೊಂದು ಬಂದು ಪುಟಗಳನ್ನು ಬಣ್ಣ ಬಣ್ಣದ ಕನಸುಗಳಿಂದ ತುಂಬಿಸಿತು......
ಅರ್ಧ ಪುಸ್ತಕ ತುಂಬಿದ ಮೇಲೆ ಲೇಖನಿ ಮತ್ತಾವುದೋ ಪುಸ್ತಕದ ವಶವಾಯಿತು....
ಈಗ ಮತ್ತದೇ ಖಾಲಿ ಪುಟಗಳು............